ಭಾರತದ ಉತ್ತರ ಪ್ರದೇಶ ರಾಜ್ಯದ ಒಂದು ಜಿಲ್ಲೆ ; ಆ ಜಿಲ್ಲೆಯ ಮುಖ್ಯ ಪಟ್ಟಣ. ಪಟ್ಟಣ ಉ. ಅ. 25ಲಿ 35’ ಮತ್ತು ಪು. ರೇ. 83ಲಿ 36’ ನಡುವೆ ಇದೆ. ಜಿಲ್ಲೆಯ ವಿಸ್ತೀರ್ಣ 3384 ಚ.ಕಿಮೀ. ಜನಸಂಖ್ಯೆ 3622727 (2011). ವಾರ್ಷಿಕ ಸರಾಸರಿ ಮಳೆ 40". ಈ ಜಿಲ್ಲೆಯ ನಡುವೆ ಗಂಗಾ ನದಿ ಹರಿಯುತ್ತದೆ. ಗಂಗಾ ನದಿಯ ಎರಡೂ ಭಾಗದಲ್ಲಿ ಹರಡಿರುವ ಸಮತಲ ಮೆಕ್ಕಲು ಮಣ್ಣಿನ ಭೂಮಿ ತುಂಬ ಫಲವತ್ತಾಗಿದೆ. ಜನಸಾಂದ್ರತೆ ಅಧಿಕ. ಕಬ್ಬು, ಬತ್ತ, ಗೋಧಿ, ಬಾರ್ಲಿ, ಅಫೀಮು ಮತ್ತು ದ್ವಿದಳ ಧಾನ್ಯಗಳು ಈ ಜಿಲ್ಲೆಯ ಪ್ರಮುಖ ಬೆಳೆಗಳು.

ಜಿಲ್ಲೆಯ ಕೇಂದ್ರವಾದ ಘಾಜೀ಼ಪುರ ಗಂಗಾ ನದಿಯ ದಡದ ಮೇಲೆ ವಾರಾಣಸಿಯಿಂದ 75 ಕಿ.ಮೀ. ಪುರ್ವದಲ್ಲಿದೆ. ಜನಸಂಖ್ಯೆ 1,05243(2001). ಭಾರತದ ಪ್ರಾಚೀನ ನಗರಗಳಲ್ಲಿ ಒಂದಾದ ಈ ನಗರಕ್ಕೆ ಮೊದಲು ಗಾಧೀಪುರ ಎಂಬ ಹೆಸರಿತ್ತು. 1330ರಲ್ಲಿ ಮುಸ್ಲಿಂ ದೊರೆಯೊಬ್ಬನ ವಂಶನಾಮಕ್ಕನುಗುಣವಾಗಿ ನಗರದ ಹೆಸರನ್ನು ಘಾಜೀಪುರ ಎಂದು ಬದಲಾಯಿಸಲಾಯಿತ್ತು. ಬ್ರಿಟಿಷ್ ಆಳ್ವಿಕೆಯ ಆರಂಭಕಾಲದಲ್ಲಿ ಇದೊಂದು ಪ್ರಮುಖ ಸೇನಾನೆಲೆಯೂ ಮುಖ್ಯ ನದೀರೇವುಪಟ್ಟಣವೂ ಆಗಿತ್ತು.

1805ರಲ್ಲಿ ನಿಧನನಾದ ಭಾರತದ ವೈಸ್ರಾಯ್ ಲಾರ್ಡ್ ಕಾರ್ನ್ವಾಲೀಸನ ಸಮಾಧಿಭವನ ಘಾಜಿ಼ೕಪುರದಲ್ಲಿದೆ. ಚರ್ಚ್, ಗೋರಾಬಜಾ಼ರ್, 40 ಸ್ತಂಭಗಳ ಅರಮನೆ ಎಂಬ ಹೆಸರು ಪಡೆದ ರಾಜಭವನ - ಇವು ಇಲ್ಲಿಯ ಪ್ರಮುಖ ಭವನಗಳು. ಘಾಜಿ಼ೕಪುರಕ್ಕೆ ರೈಲ್ವೆ ಸೌಲಭ್ಯವುಂಟು. ಗಂಗಾನದಿಯ ಒಂದು ದಡದಲ್ಲಿ ಈಶಾನ್ಯ ರೈಲ್ವೆಗೆ ಸೇರಿದ ಎರಡು ನಿಲ್ದಾಣಗಳೂ ಇನ್ನೊಂದು ದಡದಲ್ಲಿ ಪುರ್ವ ರೈಲ್ವೆಯ ಒಂದು ನಿಲ್ದಾಣವೂ ಇವೆ. ವಾರಾಣಸಿ ಮತ್ತು ಘಾಜಿ಼ೕಪುರಗಳ ನಡುವೆ ಬಸ್ಸುಗಳು ಓಡಾಡುತ್ತವೆ. ವಿವಿಧ ಬಗೆಯ ಹೂಗಳಿಂದ ತಯಾರಿಸದ ತೈಲ ಮತ್ತು ಪರಿಮಳ ದ್ರವ್ಯಗಳಿಗೆ ಘಾಜಿ಼ೕಪುರ ಪ್ರಖ್ಯಾತವಾಗಿದೆ. ಉತ್ತರ ಭಾರತದ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾದ ಈ ನಗರದ ವ್ಯಾಪಾರ, ರೈಲು ಸಂಪರ್ಕಕ್ಕೆ ಮುಂಚೆ, ಗಂಗಾನದಿಯ ಮೂಲಕ ಸಾಗುತ್ತಿತ್ತು. ಸಕ್ಕರೆ, ತಂಬಾಕು, ಹತ್ತಿ, ಪನ್ನೀರು ಇವು ಪ್ರಮುಖ ವ್ಯಾಪಾರ ಸರಕುಗಳು. ಬ್ರಿಟನ್ನಿನ ‘ಈಸ್ಟ್ ಇಂಡಿಯಾ ಕಂಪನಿ’, 1820ರಲ್ಲಿ ಆರಂಭಿಸಿದ ಇದು ಕೈಮಗ್ಗದ ಬೀಡು. ಅಪೀಮಿನ ಕಾರ್ಖಾನೆ ಫಾಜೀಪುರದಲ್ಲಿದೆ. 

ಇಲ್ಲಿ ಅನೇಕ ಜಿಲ್ಲಾ ಕಚೇರಿಗಳೂ ಕಾರ್ಖಾನೆಗಳೂ ನಾಲ್ಕು ಸ್ನಾತಕೋತ್ತರ ಕಾಲೇಜುಗಳೂ, ಶಾಲೆಗಳೂ ಇವೆ. ಇಲ್ಲಿ ‘ಸಂಕಟ್ಮೋಚನ್’ ಎಂಬ ದೊಡ್ಡ ಹನುಮಂತನ ದೇವಸ್ಥಾನವಿದೆ.	(ಎಚ್.ಜಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ